ಕಾವ್ಯ ಮಾತಾಡುವ ಚಿತ್ರ

'ಕಾವ್ಯ ಮಾತಾಡುವ ಚಿತ್ರ, ಚಿತ್ರ ನಿಶ್ಯಬ್ದ ಕಾವ್ಯ' ಎಂಬ ಈ ಗಾದೆ ಪ್ಲೂಟಾರ್ಕನ ಪ್ರಕಾರ ಪ್ರಾಚೀನ ಗ್ರೀಕರ ಸಿಮೋನಿಡಿಸನದು. ಎಲ್ಲ ಕಲೆಗಳ ಉದ್ದೇಶ ಒಂದೆಯೇ ಬೇರೆಬೇರೆಯೇ ಎಂಬ ಪ್ರಶ್ನೆಯನ್ನು ಈ ಗಾದೆ ಪ್ರಚೋದಿಸುತ್ತದಾಗಿ ಆ ವಿಷಯವನ್ನಿಲ್ಲಿ ಪ್ರಸ್ತಾಪಿಸಲಾಗಿದೆ. ಪ್ರಾಚೀನಯುಗದಲ್ಲಿ ಲಲಿತಕಲೆ ಮತ್ತು ಉಪಯುಕ್ತಕಲೆ ಎಂಬ ವಿಂಗಡನೆ ಇರಲಿಲ್ಲ. ಆಗ ಇದ್ದ ದರ್ಶನದಂತೆ ಪ್ರತಿಯೊಂದು ಕಲೆಗೂ ಯಾವುದೋ ಒಂದು ಪದಾರ್ಥವನ್ನು ನಿರ್ಮಿಸುವುದೋ ಅಥವಾ ತಯಾರಿಸುವುದೋ ಮುಖ್ಯ ಉದ್ದೇಶವಾಗಿತ್ತು. ಹೀಗಾಗಿ ಚಿತ್ರಣಕ್ಕೂ ಕವನಕ್ಕೂ ಸಾಮ್ಯವನ್ನು ತಂದಿಟ್ಟುದರಲ್ಲಿ ಏನೂ ಅಚ್ಚರಿಯಿಲ್ಲ. ಪ್ಲೇಟೊವಿನ ಹೇಳಿಕೆಯಂತೆ ಎರಡೂ ನಿತ್ಯಸತ್ಯದಿಂದ ಒಂದೆರಡು ಮಜಲಿನಷ್ಟು ದೂರವಾದವು. ಸಂಗೀತ ಮತ್ತು ಭಾಷಣ ಕಲೆಗಳಿಗೆ ಉನ್ನತ ಸ್ಥಾನವನ್ನು ಈಯಬೇಕು, ಏತಕ್ಕೆಂದರೆ ಅವು ಬರಿ ಹಸ್ತ ಕೌಶಲದಿಂದ ಆದುವಲ್ಲ, ಆಂತರಿಕ ಜ್ಞಾನದಿಂದ ಹುಟ್ಟಿಬಂದವು, ಅಲ್ಲದೆ, ಮೇಲಿನ ಆಗಸದಲ್ಲಿ ಗೋಳಕೋಶಗಾನ (ಮ್ಯೂಸಿಕ್ ಆಫ್ ದಿ ಸ್ಫಿಯರ್ಸ್) ದಿವ್ಯವಾಗಿ ನುಡಿಯುತ್ತಿದೆ ಎಂದು ಅಂದಿನ ದಾರ್ಶನಿಕರು ಬೋಧಿಸುತ್ತಿದ್ದರು; ಜನ ಅದನ್ನು ಕೇಳಿ ನಂಬುತ್ತಿದ್ದರು.

ಗ್ರೀಕರಿಂದ ಏನೇ ಆಗಿರಲಿ, ಕಾವ್ಯಕ್ಕೂ ಚಿತ್ರಕ್ಕೂ ಏರ್ಪಡಿಸಿದ ಹೋಲಿಕೆ ಗೃಹೀತತತ್ತ್ವದಂತೆ ಅಂಗೀಕೃತವಾಗುವುದಕ್ಕೆ ರೋಮನರ ಹೊರೇಸನೇ ಮುಖ್ಯ ಕಾರಣಕರ್ತ. ನಿಜವಾಗಿ ಆತ ಹೇಳಿದ್ದು ಇಷ್ಟೆ: 'ಚಿತ್ರಣ ಹೇಗಿದೆಯೊ ಕಾವ್ಯ ಹಾಗಿದೆ.' ಎಂದರೆ. ರಸಿಕರು ಚಿತ್ರವನ್ನು ವೀಕ್ಷಿಸುವಾಗ ಹೇಗೆ ದೂರದಲ್ಲಿ ನಿಂತು ಅದನ್ನು ನೋಡುವುದೇ ಅಲ್ಲದೆ ಹತ್ತಿರಕ್ಕೆ ನಡೆದು ಅದರ ವಿವರಗಳನ್ನು ಅವಲೋಕಿಸುತ್ತಾರೊ ಹಾಗೆ ಕಾವ್ಯದಲ್ಲೂ ಒಟ್ಟಿನ ಪರಿಣಾಮವೊಂದೇ ಗಮನಾರ್ಹವಾದ ಅಂಶವಲ್ಲ, ಬಿಡಿ ವಿವರಗಳೂ ಉಂಟು. ಕಾವ್ಯ ವಿಮರ್ಶೆಯಲ್ಲಿ ಅಧಿಕ ಶ್ರದ್ಧೆಗೆ ಆವಶ್ಯಕತೆ ಇದೆ ಎಂಬುದನ್ನು ಸ್ಥಾಪಿಸುವುದೇ ಹೊರೇಸನ ಅಭಿಲಾಷೆ.

ಮಧ್ಯ ಯುಗದಲ್ಲಿ ಮಠಾಧಿಕಾರಿಗಳು ಶಿಲ್ಪ, ಚಿತ್ರಣ, ವಾಸ್ತುಶಿಲ್ಪ ಮೂರಕ್ಕೂ ಸಾಹಿತ್ಯಿಕ ಯೋಜನೆಗಳನ್ನು ತಯಾರಿಸಿ ಕೊಡುತ್ತಿದ್ದರು. ಅವನ್ನು ಅನುಸರಿಸಿ ಆಯಾ ಕಲೆಗಾರರು ತಮ್ಮ ತಮ್ಮ ಕೃಷಿಯನ್ನು ಮಾಡಿ ಮುಗಿಸುತ್ತಿದ್ದರು.

ಹೊಸ ಹುಟ್ಟಿನ ಅವಧಿಯಲ್ಲಿ ಎದ್ದುಬಂದ ಗ್ರೀಕ್‍ಲ್ಯಾಟಿನ್ ಪಂಡಿತರು ಕಾವ್ಯ ಮತ್ತು ಚಿತ್ರಕಲೆ ಎರಡೂ ಪ್ರಚೋದನೆಗಳನ್ನು ಸ್ವೀಕರಿಸಿದರು; ಅಷ್ಟಕ್ಕೇ ತೃಪ್ತರಾಗಲಿಲ್ಲ. ಕಲೆಗಳ ಸಮನ್ವಯ--ಮುಖ್ಯವಾಗಿ ಕಾವ್ಯ ಚಿತ್ರಗಳ ಹೊಂದಾಣಿಕೆ--ಅವರ ಕಲಾ ಮೀಮಾಂಸೆಯಲ್ಲಿ ಗಾಢ ಸಿದ್ಧಾಂತವಾಯಿತು. ಕವಿಯಂತೆಯೇ ಚಿತ್ರಕಾರ ತನ್ನ ವಿಷಯ, ಭಾವ, ಭಾವನೆ, ಸಂವಿಧಾನ, ಅಲಂಕಾರ, ಕಲ್ಪನೆ--ಎಲ್ಲವನ್ನೂ ಸಿದ್ಧಪಡಿಸಿಕೊಂಡು ಬಣ್ಣಬಣ್ಣದ ರಚನೆಯನ್ನು ಎಸಗುತ್ತಾನೆ. ಕವಿಯೂ ಚಿತ್ರಕಾರನಂತೆ ನಕ್ಷೆ ನಕಾಶೆಗಳನ್ನು ಅಣಿಮಾಡಿಕೊಂಡು ರಂಗುರಂಗಾದ ಶಬ್ದಗಳನ್ನೂ ಬೆಡಗಿನ ಅಲಂಕಾರಗಳನ್ನೂ ಸಾಮರಸ್ಯ ಕೆಡದಂತೆ ಜೋಡಿಸಿ ಕಾವ್ಯ ಕಟ್ಟುತ್ತಾನೆ. ಈ ಬಗೆಯ ವಿವರಣೆಯನ್ನು 16ನೆಯ ಶತಮಾನದ ಮಧ್ಯದಿಂದ 18ನೆಯ ಶತಮಾನದ ಮಧ್ಯದವರೆಗೂ ಯುರೋಪು ಪೂರ್ತ ಯಾರೂ ಪ್ರಶ್ನಿಸಲಿಲ್ಲ. ಬಾಹ್ಯ ಪ್ರಕೃತಿಯ ದೃಶ್ಯಗಳನ್ನು ವರ್ಣಿಸುವ ಕಾವ್ಯ 18ನೆಯ ಶತಮಾನದಲ್ಲಿ ಬಹುವಾಗಿ ಬೆಳೆದು ಅದಕ್ಕೆ ಬೆಂಬಲ ಕೊಟ್ಟಿತು.

ಈ ಮಧ್ಯೆ ಚಿತ್ರಣಕಲೆಯ ರಸಾಸ್ವಾದಿಗಳಿಗೆ ತಮ್ಮ ಕಲೆ ಕೇವಲ ಕಸಬು ಎಂಬ ಅಪಖ್ಯಾತಿ ಇದ್ದುದು ಗೊತ್ತಿತ್ತು. ಕಾವ್ಯದೊಡನೆ ಅದನ್ನು ಸರಿಸಮನಾಗಿ ಕೂರಿಸಿದರೆ ಅದಕ್ಕೆ ಮೇಲಣ ಗದ್ದುಗೆ ದೊರಕಿಯೇ ದೊರಕುತ್ತದೆಯೆಂದು ಭಾವಿಸಿ, ಪ್ರಮಾಣ ಗ್ರಂಥಗಳಿಗಾಗಿ ಶ್ರಮಪಟ್ಟು ಹುಡುಕಾಡಿದರು. ಪುರಾತನ ಗ್ರಂಥ ಯಾವುದೂ ಅವರಿಗೆ ಲಭಿಸಲಿಲ್ಲ. ಹೊರೇಸನ ವಚನದಂಥ ಪುಟ್ಟ ಸಾಮತಿಗಳೇ ಅವರಿಗೆ ಸರ್ವಧಾರವಾದುವು, ಸಂತಸಕರವಾದುವು.

ಒಂದು ಕಲೆಗೆ ಇನ್ನೊಂದರ ಪರಿಭಾಷೆಯನ್ನು ಹೊಂದಿಸಲಾಶಿಸುವುದು ಮನುಷ್ಯನ ಮೂಲಧರ್ಮ. ಗಯಟೆಗೆ ವಾಸ್ತುಶಿಲ್ಪ 'ಕಲ್ಲಾದ ಗಾಯನ' ವಾದರೆ ಮಡಾಮ್ ಡ ಸ್ಟೀಲಳಿಗೆ--ವಿಶ್ವಾಕಾಶ 'ಒಂದು ರೀತಿ ಹೆಪ್ಪುಗಟ್ಟಿದ ಸಂಗೀತ'.

ಪ್ರತಿಭಾಯುಕ್ತ ವಿಮರ್ಶಕನಾದ ಲೆಸ್ಸಿಂಗಿಗೆ ಇದಾವುದೂ ಸರಿಬೀಳಲಿಲ್ಲ. ಕಾವ್ಯದ ಕೆಲಸ ಪ್ರಕೃತಿ ವರ್ಣನೆಯಲ್ಲ, ಮನುಷ್ಯನ ನಡೆನುಡಿಯನ್ನು ಭಾವಾಯುಕ್ತವಾಗಿ ನಿರೂಪಿಸುವುದು--ಎಂಬುದೇ ಅವನ ದೃಢ ನಿಶ್ಚಯ. ಒಂದರಂತೆ ಮತ್ತೊಂದು ತೋರಿಬಂದರೂ ಕಲೆಗಳ ಉದ್ದೇಶ ಬೇರೆ ಬೇರೆ, ಅವುಗಳ ವಿಷಯ ಸಾಮಗ್ರಿಗಳೂ ಬೇರೆ ಬೇರೆ--ಎಂದೂ ಆತ ದರ್ಪದಿಂದಲೂ ವೈದುಷ್ಯದಿಂದಲೂ ವಾದಿಸಿದ: ಕಲಾಚರ್ಚೆಯಲ್ಲಿ ಆವರಿಸಿಕೊಂಡಿದ್ದ ಅವ್ಯವಸ್ಥೆ ಅವನಿಂದ ಬಹು ಮಟ್ಟಿಗೆ ನಿವಾರಿತವಾಯಿತು.

19ನೆಯ ಶತಮಾನದಲ್ಲೇ ಹೊರೇಸನ ಉಕ್ತಿಯನ್ನು ಲಕ್ಷ್ಯಾರ್ಹವೆಂದು ಭಾವಿಸಿದವರು ಅಪರೂಪ; 20ನೆಯ ಶತಮಾನದಲ್ಲಂತೂ ಅದಕ್ಕೆ ಯಾವ ಪುರಸ್ಕಾರವೂ ಇಲ್ಲ.      

(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ